ದೇವದಾಸಿ ಪದ್ಧತಿ ನಿಷೇಧ ಕಾಯಿದೆ-1982, ʼ ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) ತಿದ್ದುಪಡಿ ಕಾಯ್ದೆ 2009 ರ ಕೆಲವು ನ್ಯೂನತೆಗಳನ್ನು ಗುರುತಿಸುವ ಮೂಲಕ ಕರ್ನಾಟಕ ಸರ್ಕಾರವು ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದೊಂದಿಗೆ “ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಕಾಯ್ದೆ-2025 ಅನ್ನು ರಾಜ್ಯದ ಎರಡು ಸದನಗಳಲ್ಲಿ ಮಂಡಿಸಿ ಅನುಮೋದನೆಗೊಂಡಿದೆ. ಈ ಹೊಸ ಕಾನೂನು ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ, ಅವರಿಗೆ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕಾಯ್ದೆ ಜಾರಿಯಿಂದ, “ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) ಕಾಯ್ದೆ 1982, ಮತ್ತು ʼ ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) ತಿದ್ದುಪಡಿ ಕಾಯ್ದೆ 2009 ರದ್ದುಗೊಂಡಿದೆ. ಈ ಮೂಲಕ, ದೇವದಾಸಿ ಮಹಿಳೆಯರನ್ನು ಎಲ್ಲಾ ರೀತಿಯ ಶೋಷಣೆಗಳಿಂದ ಹಾಗೂ ಅವರ ಮಕ್ಕಳನ್ನು ಸಾಮಾಜಿಕ ನಿಷೇಧದಿಂದ ಮುಕ್ತಗೊಳಿಸುವ ದಿಸೆಯಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ದೇವದಾಸಿಯರು ಸಮಾಜದ ನಿಮ್ನ ವರ್ಗದವರು, ಇವರಲ್ಲಿ ಮನೆ ಮಾಡಿರುವ ಮೌಡ್ಯ, ಆರ್ಥಿಕವಾಗಿ ಹಿಂದುಳಿದವರು, ಅವಕಾಶ ವಂಚಿತರು, ಶೋಷಣೆಗೆ ತಲೆತಲಾಂತರಗಳಿಂದ ಒಳಗಾದವರು, ಸ್ವಂತಿಕೆ ಇಲ್ಲದವರು, ನಿರುಕುಕ್ಷಿಗಳು, ನೂರಾರು ದೇವಾನುದೇವತೆಗಳಲ್ಲಿ ಮತ್ತು ಅಗೋಚರ ಶಕ್ತಿಗಳಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿ ತಮ್ಮತನವನ್ನು ಕಳೆದುಕೊಂಡವರು ಆಗಿದ್ದಾರೆ.
ದೇವದಾಸಿ ಪದ್ಧತಿ ಎಂದರೇನು?
ವೇದಪೂರ್ವಕಾಲದಿಂದಲೂ ಭಾರತದಲ್ಲಿ ದೇವದಾಸಿ ಪದ್ಧತಿ ಇತ್ತು. ಭೂಮಾಲೀಕರು, ಶ್ರೀಮಂತರು, ತಮ್ಮ ಹರಕೆ ಸಲ್ಲಿಸುವ ಸಲುವಾಗಿ ದೇವಾಲಯಗಳನ್ನು ನಿರ್ಮಿಸುವ ಪರಿಪಾಠವಿತ್ತು. ಅದರ ಶುಚಿತ್ವ ಮುಂತಾದ ಕಾರಣಗಳ ಸಲುವಾಗಿ ಆ ದೇವಾಲಯದಲ್ಲಿರಲು ಚಲುವೆಯರಾದ ತರುಣಿಯರನ್ನು ನಿಯೋಜಿಸುತ್ತಿದ್ದದ್ದೂ ರೂಢಿಯಲ್ಲಿತ್ತು. ಮೊದಲು ದೇವಸ್ಥಾನಗಳೊಂದಿಗೆ ಸಂಬಂಧ ಹೊಂದಿದ್ದ ನರ್ತಕಿಯರು ಮತ್ತು ಹಾಡುಗಾರ್ತಿಯರು ದೇವತೆ, ಹೆಣ್ಣಾಳುಗಳು ಅಂದರೆ ದೇವದಾಸಿಯರು ಎಂದು ಕರೆಯುತ್ತಿದ್ದರು. ಮೇಲ್ವರ್ಗದವರಿಂದ ಶೋಷಣೆಗೆ ಒಳಗಾದರು. ದೇವದಾಸಿಯರು ಎಂಬ ಹೆಸರಿನಲ್ಲಿ ದೇವರಿಗೆ ಅರ್ಪಿಸಲ್ಲಪಟ್ಟ ಈ ಮಹಿಳೆಯರು ದಾರ್ಮಿಕ, ಅನುಮೋದನೆಯೊಂದಿಗೆ ಜೀವನನ್ನು ಸಾಗಿಸಲಾರಂಭಿಸಿದರು. ದೇವದಾಸಿ ಬೆಳೆಯಲು ಧಾರ್ಮಿಕ ಒತ್ತಡಗಳು ಮಾತ್ರವಲ್ಲದೆ ಆರ್ಥಿಕ, ಮಾನಸಿಕ, ಸಾಮಾಜಿಕ ಕಾರಣಗಳು ಇವೆ. ಈ ಪದ್ಧತಿಯನ್ನು ಜೈನ ಬೌದ್ಧ ಧರ್ಮಗಳಲ್ಲೂ ಕಾಣಬಹುದು. ಕ್ರಮೇಣ ಬೌದ್ಧ ಜೈನ ಧರ್ಮ ಸಂಸ್ಥೆಗಳನ್ನು ತನ್ನೊಡಲಿನಲ್ಲಿ ಸೇರಿಸಿಕೊಂಡ ಹಿಂದೂ ಧರ್ಮವು ಎಲ್ಲ ಸಂನ್ಯಾಸಿನಿಯರನ್ನೂ ದೇವದಾಸಿಯರನ್ನಾಗಿ ಪರಿವರ್ತಿಸಿ ಬಳಸಿಕೊಂಡಿದ್ದು ಶೋಚನೀಯ. ಕುಟುಂಬವೊಂದರಲ್ಲಿ ಒಂದು ಹೆಣ್ಣು ಮಗುವಿನ ಜನನವಾದರೆ, ಎಲ್ಲರೂ ಅತೀವ ಸಂತೋಷದಿಂದ ಆ ಜನನವನ್ನು ಸ್ವೀಕರಿಸಿ ದೇವರುಗಳಿಗೆ ಧನ್ಯತೆಯನ್ನು ಅರ್ಪಿಸುತ್ತಾರೆ. ಕಾರಣವಿಷ್ಟೇ, ಮುಂದೆ ಕಾಲಚಕ್ರ ಉರುಳಿದಂತೆ ಮನೆಯ ಸಮಸ್ಥ ಜವಾಬ್ದಾರಿಯನ್ನು ಈಕೆ ನಿಭಾಯಿಸುತ್ತಾಳೆ ಎಂಬ ಬಲವಾದ ನಂಬಿಕೆ ಇವರಲ್ಲಿದೆ. ಈ ನಂಬಿಕೆ ಇವರ ಸಂಪ್ರದಾಯ ಹಾಗೂ ಕಟ್ಟುಪಾಡುಗಳ ನಿಯಂತ್ರಣಕ್ಕೆ ಒಳಗಾಗಿರುತ್ತದೆ. ಈ ಎಲ್ಲಾ ಕುಟುಂಬದಲ್ಲಿ ಪ್ರತಿ ಕುಟುಂಬದಿಂದ ಒಬ್ಬಳನ್ನಾದರೂ ದೇವದಾಸಿಯನ್ನಾಗಿ ಮಾಡುವ ಕಟ್ಟಳೆ ಅಥವಾ ಸಂಪ್ರದಾಯ ಅಥವಾ ನಿಯಮಗಳಿರುವುದರಿಂದ ಮುಂದೆ ದೇವರ ಹೆಸರಿನಲ್ಲಿ ದುಡಿದು ಕುಟುಂಬವನ್ನು ಸಾಕುವ ಸಾಮರ್ಥ್ಯಗಳಿಸುತ್ತಾಳೆ ಎಂಬ ಅಚಲ ನಂಬಿಕೆ ಇವರಲ್ಲಿದೆ.ಇವರನ್ನು ದೇವದಾಸಿ ಹೆಸರಿನೊಂದಿಗೆ ಬಸವಿ, ಸೂಳೆ, ಕಾಮಿನಿ, ಪ್ರಣಯ ರಾಣಿ, ಗಣಿಕೆಯರು ಮುಂತಾದ ಹೆಸರಿನೊಂದಿಗೆ ಕರೆಯುತ್ತಿದ್ದರು.
ದೇವದಾಸಿ ಎಂಬುದು ದೇವಾಲಯದಲ್ಲಿರುವ ದೇವತೆಗೆ ತನ್ನ ಜೀವನದುದ್ದಕ್ಕೂ ಪೂಜೆ ಮತ್ತು ಸೇವೆಗಾಗಿ ‘ಸಮರ್ಪಿತ’ ಹುಡುಗಿಗೆ ನೀಡಲಾಗುವ ಹೆಸರಾಗಿದೆ. ದೇವದಾಸಿ ಪದ್ಧತಿಯು ಒಂದು ಸಾಮಾಜಿಕ ಅನ್ಯಾಯವಾಗಿದ್ದು, ಇದರಲ್ಲಿ ಮಹಿಳೆಯರು ದೇವರ ಸೇವೆಗಾಗಿ ದೇವಾಲಯಗಳಿಗೆ ಸಮರ್ಪಿಸಲ್ಪಟ್ಟರೂ, ಪ್ರಾಯೋಗಿಕವಾಗಿ ಅವರು ಲೈಂಗಿಕ ಶೋಷಣೆ ಮತ್ತು ಸಾಮಾಜಿಕ ಹಿಂಸೆಗೆ ಗುರಿಯಾಗುತ್ತಾರೆ. ಈ ಪದ್ಧತಿಯು ಹಲವಾರು ಜಿಲ್ಲೆಗಳಲ್ಲಿ ವಿಶೇಷವಾಗಿ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಇನ್ನೂ ಪ್ರಚಲಿತದಲ್ಲಿದೆ. ದೇವದಾಸಿಯರ ಜನಾಂಗದ ಹಿನ್ನಲೆಯನ್ನು ನೋಡಿದರೆ ಹೆಚ್ಚಿನದಾಗಿ ಇವರೆಲ್ಲರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಕರ್ನಾಟಕದಲ್ಲಿ ದೇವದಾಸಿಯರ ನಿಖರವಾದ ಸಂಖ್ಯೆ ಲಭ್ಯವಿಲ್ಲ, ಏಕೆಂದರೆ ಇದುವರೆಗಿನ ಸಮೀಕ್ಷೆಗಳು ಕೇವಲ ಒಂದು ಅಂದಾಜು ನೀಡುತ್ತವೆ ಮತ್ತು ಇತ್ತೀಚೆಗೆ ಒಂದು ಸಮಗ್ರ ಸಮೀಕ್ಷೆಯನ್ನು ನಡೆಸಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ (SHRC) ನಿರ್ದೇಶನ ನೀಡಿದೆ. 1993-1994ರ ಸಮೀಕ್ಷೆಯು 22,873 ದೇವದಾಸಿಯರಿದ್ದರೆ, 2007-2008ರ ಸಮೀಕ್ಷೆಯು 46,660 ಎಂದು ಸೂಚಿಸಿತ್ತು. ಕೆಲವು ಎನ್‌ಜಿಒಗಳು 2020ರಲ್ಲಿ 80,000ಕ್ಕೂ ಹೆಚ್ಚು ದೇವದಾಸಿಯರು ಇರಬಹುದು ಎಂದು ಅಂದಾಜಿಸಿದ್ದಾರೆ.
ಹೊಸ ಕಾಯ್ದೆಯ ಪ್ರಮುಖ ಅಂಶಗಳು
- ದೇವದಾಸಿ ಪದ್ಧತಿಯ ಸಂಪೂರ್ಣ ನಿಷೇಧ: ದೇವದಾಸಿಯಾಗಿ ಮಹಿಳೆಯರನ್ನು ಸಮರ್ಪಿಸುವುದು ಅಥವಾ ಸ್ವಯಂ ಸಮರ್ಪಿಸಿಕೊಳ್ಳುವುದನ್ನು ಕಾನೂನುಬಾಹಿರವೆಂದು ಘೋಷಿಸಲಾಗುತ್ತದೆ. ಈ ಪದ್ಧತಿಯನ್ನು ಪ್ರಚಾರ ಮಾಡುವ ಅಥವಾ ಉತ್ತೇಜಿಸುವವರಿಗೆ 1 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 50000 ರಿಂದ 2 ಲಕ್ಷದವರೆಗೆ ದಂಡ ವಿಧಿಸಲಾಗುವುದು. ದೇವಾಲಯಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಮರ್ಪಣೆ ನಡೆಸಿದರೆ, ಸಂಬಂಧಿತ ಅಧಿಕಾರಿಗಳು ತಡೆಯಾಜ್ಞೆ ಹೊರಡಿಸಬಹುದು. ಈ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ, ದೇವದಾಸಿ ನಿಷೇಧ ಮತ್ತು ಪುನರ್ವಸತಿ ಅಧಿಕಾರಿ ಅಥವಾ ತಾಲ್ಲೂಕು ಅಥವಾ ರಾಜ್ಯ ಸಮಿತಿಯು ಅಂತಹ ಸಮರ್ಪಣೆಯನ್ನು ನಿಷೇಧಿಸಿ ತಡೆಯಾಜ್ಞೆ ಹೊರಡಿಸಬಹುದು.
- ದೇವದಾಸಿ ಮಕ್ಕಳ ಪಿತೃತ್ವ ಹಕ್ಕು : ದೇವದಾಸಿ ಮಹಿಳೆಯ ಮಕ್ಕಳು ತಮ್ಮ ಜೈವಿಕ ತಂದೆಯನ್ನು ಗುರುತಿಸುವ ಹಕ್ಕನ್ನು ಹೊಂದಿರುತ್ತಾರೆ. ತಂದೆಯು ಸ್ವಯಂ ಒಪ್ಪಿಕೊಂಡರೆ, ಅದನ್ನು ಲಿಖಿತವಾಗಿ ದಾಖಲಿಸಬೇಕು. ನಿರಾಕರಿಸಿದರೆ, ಡಿಎನ್‌ಎ ಪರೀಕ್ಷೆ ಮೂಲಕ ಪಿತೃತ್ವವನ್ನು ನಿರ್ಧರಿಸಲಾಗುವುದು. ಮಕ್ಕಳು ತಮ್ಮ ತಂದೆಯ ಆಸ್ತಿ ಮತ್ತು ಉತ್ತರಾಧಿಕಾರದ ಹಕ್ಕನ್ನು ಪಡೆಯುತ್ತಾರೆ.
- ಜೀವನಾಂಶ ಮತ್ತು ಆರ್ಥಿಕ ಸಹಾಯ : ದೇವದಾಸಿ ಮಕ್ಕಳು ತಮ್ಮ ತಂದೆಯಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ದೇವದಾಸಿ ಕುಟುಂಬವು ದೇವದಾಸಿ ಮತ್ತು ದೇವದಾಸಿಯ ಎರಡನೇ ತಲೆಮಾರಿನವರೆಗಿನ ವಂಶಾವಳಿಯನ್ನು ಒಳಗೊಂಡಿದೆ ಮತ್ತು ಅವರಿಗೆ ಸೀಮಿತವಾಗಿ ಇರಲಿದೆ. ಅಂದರೆ, ದೇವದಾಸಿ ಮಕ್ಕಳು ಮತ್ತು ಆಕೆಯ ಮೊಮ್ಮಕ್ಕಳು. ಪ್ರತಿಯೊಬ್ಬ ದೇವದಾಸಿ ಮತ್ತು ಅವಳ ಮಗುವು ಎಲ್ಲ ರೀತಿಯಿಂದ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಉದ್ದಕ್ಕೂ ಗೋಪ್ಯತೆ ಮತ್ತು ಗೋಪ್ಯತೆಯ ರಕ್ಷಣೆಯ ಹಕ್ಕು ಹೊಂದಿರುತ್ತಾರೆ. ಗಂಡು ಮಕ್ಕಳು ಪ್ರೌಢವಸ್ಥೆಯವರೆಗೆ ಮತ್ತು ಹೆಣ್ಣು ಮಕ್ಕಳು ವಿವಾಹವಾಗುವರೆಗೆ ಈ ಹಕ್ಕು ಅನ್ವಯಿಸುತ್ತದೆ. ದೇವದಾಸಿಗೆ ಜನಿಸುವ ಮಗುವನ್ನು ಹಿಂದೂ ಧರ್ಮದ ವೈಯಕ್ತಿಕ ಕಾನೂನಿನ ಪ್ರಕಾರ ಕಾನೂನು ಬದ್ಧ ಮಗು ಎಂದು ಪರಿಗಣಿಸಲಾಗುತ್ತದೆ. ಇಬ್ಬರೂ ಪೋಷಕರ ಆಸ್ತಿಯ ಉತ್ತರಾಧಿಕಾರಿ ಮತ್ತು ಉತ್ತರಾಧಿಕಾರ ಹೊಂದುವ ಅರ್ಹತೆ ಮಗುವಿಗೆ ಇರಲಿದೆ.
- ಸಾಮಾಜಿಕ ಸುರಕ್ಷತೆ ಮತ್ತು ಗೋಪ್ಯತೆ : ದೇವದಾಸಿ ಮಹಿಳೆ ಮತ್ತು ಮಕ್ಕಳ ಗೋಪ್ಯತೆಯನ್ನು ಕಾಪಾಡಲು ವಿಶೇಷ ಕಾನೂನು ರಕ್ಷಣೆ ನೀಡಲಾಗುವುದು. ದೇವದಾಸಿ ಮಗುವಿಗೆ ತನ್ನ ತಂದೆ ತಿಳಿದಿಲ್ಲ ಎಂಬ ಕಾರಣಕ್ಕೆ ತಾರತಮ್ಯ ಮಾಡಲು ಅವಕಾಶ ಇಲ್ಲ. ಶಿಕ್ಷಣ, ಆರೋಗ್ಯ ಸರ್ಕಾರಿ ಯೋಜನೆಗಳು ಮತ್ತು ದಾಖಲೆಗಳಲ್ಲಿ ತಂದೆಯ ಹೆಸರು ಕಡ್ಡಾಯವಲ್ಲ. ದೇವದಾಸಿ ಮಗುವಿಗೆ ತನ್ನ ತಂದೆ ತಿಳಿದಿಲ್ಲ ಎಂಬ ಕಾರಣಕ್ಕೆ ತಾರತಮ್ಯ ಮಾಡಲು ಅವಕಾಶ ಇಲ್ಲ. ದೇವದಾಸಿಯ ಮಕ್ಕಳು ಶಿಕ್ಷಣ, ಆರೋಗ್ಯ ಮತ್ತು ಪರವಾನಿಗಳು, ಪಾಸ್‌ಪೋರ್ಟ್, ಪಾನ್‌ಕಾರ್ಡ್, ಪಡಿತರ ಚೀಟಿ ಮತ್ತಿತರ ದಾಖಲೆಗಳಿಗೆ ಅರ್ಜಿಸಲ್ಲಿಸುವಾಗ ತನ್ನ ತಂದೆಯ ಹೆಸರು ಘೋಷಿಸುವುದು ಕಡ್ಡಾಯವಾಗಿತ್ತು, ಇದು ಇನ್ನು ಮುಂದೆ ಕಡ್ಡಾಯವಾಗಿರುವುದಿಲ್ಲ.
- ಪುನರ್ವಸತಿ ಮತ್ತು ಸಬಲೀಕರಣ : ದೇವದಾಸಿ ಕುಟುಂಬಗಳಿಗೆ ಉಚಿತ ವಸತಿ, ಶಿಕ್ಷಣ, ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲಾಗುವುದು. ರಾಜ್ಯ ಸರ್ಕಾರವು ಅವರ ಪುನರ್ವಸತಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲಿದೆ.
- ತೀರ್ವ ಶಿಕ್ಷೆ ಮತ್ತು ಕಾರ್ಯಾಚರಣೆ : ಕಾಯ್ದೆಯಿಂದ ದೇವದಾಸಿಯಾಗಿ ಮಹಿಳೆಯನ್ನು ಅರ್ಪಿಸುವ ಯಾವುದೇ ಸಮಾರಂಭ ಅಥವಾ ಕಾರ್ಯವನ್ನು ನಿಯಂತ್ರಣದಲ್ಲಿರುವ ಆವರಣದಲ್ಲಿ ನಿರ್ವಹಿಸಲು, ಅನುಮತಿಸಲು, ಭಾಗವಹಿಸಲು ಅಥವಾ ಪ್ರಚೋಧಿಸಲು ಯಾರು ಅನುಮತಿಯನ್ನು ನೀಡುತ್ತಾರೋ ಅಥವಾ ಅದಕ್ಕೆ ಸಂಬಂದಿಸಿದ ಯಾವುದೇ ಸಮಾರಂಭ ಅಥವಾ ಕೃತ್ಯವನ್ನು ಎಸಗುತ್ತಾರೋ ಅದನ್ನು ಅಪರಾಧವೆಂದು ಪರಿಗಣಿಸುವುದು. ದೇವದಾಸಿ ಪದ್ಧತಿಯನ್ನು ಮುಂದುವರಿಸುವವರೆಗೆ 5 ವರ್ಷದ ಜೈಲು ಮತ್ತು 1 ಲಕ್ಷದವರೆಗೆ ದಂಡ. ಜಾತ್ರೆಗಳು ಮತ್ತು ಹಬ್ಬಗಳ ಸಮಯದಲ್ಲಿ ಸಾಮೂಹಿಕ ಸಮರ್ಪಣೆಯನ್ನು ತಡೆಯಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟು ಕ್ರಮ ತೆಗೆದುಕೊಳ್ಳಬೇಕು. ದೇವದಾಸಿ ಪದ್ಧತಿಯನ್ನು ಉತ್ತೇಜಿಸಿದರೆ ಅಥವಾ ಪ್ರಚಾರ ಮಾಡಿದರೆ ಒಂದು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 50 ಸಾವಿರ ಕಡಿಮೆ ಇಲ್ಲದಂತೆ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು. ಒಮ್ಮೆ ಶಿಕ್ಷೆಗೆ ಒಳಗಾಗಿರುವವರು ಅಪರಾಧ ಪುನರಾವರ್ತಿಸಿದರೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 2 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.
ನಿರೀಕ್ಷಿತ ಪರಿಣಾಮಗಳು : ಈ ಕಾನೂನು ಬಾಧಿತ ಮಹಿಳೆಯರ ಉದ್ದಾರಕ್ಕಾಗಿ ಭೂಮಿ, ವಸತಿ ಮತ್ತು ಆರೋಗ್ಯ ಬೆಂಬಲ ಸೇರಿದಂತೆ ಸಮಗ್ರ ಪುನರ್ವಸತಿಯನ್ನು ಒದಗಿಸುತ್ತದೆ. ದೇವದಾಸಿಯರು ನೋಂದಣಿಯಾಗದೆ ಮತ್ತು ಕಲ್ಯಾಣ ಯೋಜನೆಗಳಿಂದ ಹೊರಗುಳಿದಿರುವ ಪ್ರಸ್ತುತ ಅಂತರವನ್ನು ನಿವಾರಿಸಲಿದೆ. ಇದರಿಂದ ದೇವದಾಸಿ ಪದ್ಧತಿಯು ಕ್ರಮೇಣ ಅಳಿದು ಹೋಗುತ್ತದೆ. ಶೋಷಿತ ಮಹಿಳೆಯರು ಮತ್ತು ಮಕ್ಕಳಿಗೆ ನ್ಯಾಯ ಮತ್ತು ಸಮಾಜದಲ್ಲಿ ಗೌರವ ಲಭಿಸುತ್ತದೆ. ಪಿತೃತ್ವ ಹಕ್ಕು ಮತ್ತು ಆಸ್ತಿ ಹಕ್ಕುಗಳು ಖಚಿತವಾಗುತ್ತದೆ. ಸರ್ಕಾರದ ಪುನರ್ವಸತಿ ಯೋಜನೆಗಳಿಂದ ಅವರ ಜೀವನ ಮಟ್ಟ ಸುಧಾರಿಸುತ್ತದೆ. ಕರ್ನಾಟಕ ಸರ್ಕಾರದ ಈ ಹೊಸ ಕಾಯ್ದೆಯು ದೇವದಾಸಿ ಪದ್ಧತಿಯನ್ನು ಬೇರು ಸಹಿತ ನಿರ್ಮೂಲನೆ ಮಾಡುವ ದಿಶೆಯಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಇದು ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ದಾರಿ ಮಾಡಿಕೊಡುತ್ತದೆ. ಈ ಕಾನೂನು ಯಶಸ್ವಿಯಾಗಲು ಸರ್ಕಾರ, ನ್ಯಾಯಾಂಗ ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ.
ಮುಂದಿನ ಕ್ರಮಗಳು
ಇದಕ್ಕೆ ಕಾನೂನು ಅಷ್ಟೇ ಸಾಲದು ಜನತೆಯಲ್ಲಿ ಬೇರೂರಿರುವ ಅಂಧಶ್ರದ್ಧೆ ಅಸಮಾನತೆಗಳು ಧಿಡೀರನೆ ನಾಶ ವಾಗುವುದಿಲ್ಲ ಬದಲಾವಣೆಯನ್ನು ತಕ್ಷಣ ಅಪೇಕ್ಷಿಸುವುದು ಕಷ್ಟ ಸಾಧ್ಯ. ಇದೇ ಸಂದರ್ಭದಲ್ಲಿ ದೇವದಾಸಿಯರ ಪ್ರಸ್ತುತ ಸಾಮಾಜಿಕ ಜೀವನ, ಪುರ್ವಸತಿ, ಸಾಮಾಜಿಕ ಮತ್ತು ಆರ್ಥಿಕ ಹಿನ್ಲೆಗಳು, ದೇವದಾಸಿಯರ ಮಕ್ಕಳ ಕುರಿತು ಗುರಿ ಮತ್ತು ಆಕಾಂಕ್ಷೆಗಳು, ದೇವದಾಸಿಯರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಇರುವ ಅಂತರಗಳನ್ನು ಪರಿಹರಿಸುವ ಕಾರ್ಯವನ್ನು ಈ ಕಾಯಿದೆಯೊಂದಿಗೆ ನಡೆಸಬೇಕಾಗಿರುವುದು ತುರ್ತಾಗಿದೆ.
ಲೇಖನ:
ಡಾ. ರಾಜೇಂದ್ರಪ್ರಸಾದ್.ಪಿ, ಎಂ.ಎಸ್.ಡಬ್ಲ್ಯೂ., ಪಿ.ಎಚ್.ಡಿ.
ಮುಖ್ಯಸ್ಥರು
ಸಮುದಾಯ ಸಮಾಲೋಚನಾ ವಿಭಾಗ
ಗ್ರಾಮ್, ಮೈಸೂರು


