Wednesday, January 15, 2025
6:00 pm

ಸುಶಾಸನ ದಿವಸ: ಆಚರಣೆಗೋ? ಅವಲೋಕನಕ್ಕೋ? ಅನುಸರಣೆಗೋ?

ಸುಶಾಸನ ದಿವಸ: ಆಚರಣೆಗೋ? ಅವಲೋಕನಕ್ಕೋ? ಅನುಸರಣೆಗೋ?

Responsible Citizenship’ is important for Good Governance in Democracy” – Dr Basavaraju R Shreshta discusses the relevance of the celebration of Good Governance Day in a Kannada daily Vishwavani .

2014ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿರವರು ಡಿಸೆಂಬರ್ 25ನ್ನು ಸುಶಾಸನ ದಿನವನ್ನಾಗಿ ಆಚರಿಸಬೇಕೆಂದು ಸಂಕಲ್ಪ ತೊಟ್ಟಾಗ ದಿನಂಪ್ರತಿ ಒಂದಿಲ್ಲೊಂದು ಆಚರಣೆ, ಹಬ್ಬ-ಹರಿದಿನ ಇರುವ ನಮ್ಮ ದೇಶಕ್ಕೆ ಇನ್ನೊಂದು ಆಚರಣಾ ದಿನವಿರಲಿ ಎನ್ನುವ ಉದ್ದೇಶ ಇರಲಿಕ್ಕೆ ಖಂಡಿತಾ ಸಾಧ್ಯವಿಲ್ಲ. ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಮಾನ್ಯ ಪ್ರಧಾನಿಗಳ ಘೋಷ ಮಂತ್ರವಾಗಿತ್ತು. ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಆಗಬೇಕಾದರೆ ಗರಿಷ್ಠ ಆಡಳಿತ ಅನಿವಾರ್ಯ.

ಶಾಸನಗಳ ರಚನೆಗೆ ಶಾಸಕಾಂಗ, ನ್ಯಾಯದಾನ ಮತ್ತು ಕಾನೂನಿನ ವ್ಯಾಖ್ಯಾನ ಕ್ಕಾಗಿ ನ್ಯಾಯಾಂಗ, ಶಾಸನದ ಅನುಷ್ಠಾನಕ್ಕೆ ನೇಮಿತ ಆಡಳಿತಗಾರರು ಮತ್ತು ಚುನಾಯಿತ ರಾಜಕೀಯ ಪ್ರತಿನಿಧಿಗಳು ನಮ್ಮ ಆಡಳಿತ ವ್ಯವಸ್ಥೆಯ ಅಂಗಗಳು. ಈ ಮೂರರಲ್ಲಿ ಕಾರ್ಯಾಂಗ ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತಿ ಮುಖ್ಯ ಎನ್ನುವುದಕ್ಕೆ ಇತಿಹಾಸ ನಮಗೆ ಪುರಾವೆ. ಯಾವ ಯಾವ ಸಂದರ್ಭದಲ್ಲಿ ಕಾರ್ಯಾಂಗ ಬಹುಜನರ ಹಿತ ಕಾಯುವ ಜವಾಬ್ದಾರಿ ನಿಭಾಯಿಸುವಲ್ಲಿ ಸೋತಿದೆಯೋ, ಆಗೆಲ್ಲ ನಾಗರೀಕತೆಯ ಮತ್ತು ವ್ಯವಸ್ಥೆಯ ಅವಸಾನವಾಗಿರುವುದನ್ನು ನಾವು ಅನುಭವಿಸಿದ್ದೇವೆ.

ಸುಶಾಸನವನ್ನು ಸಾಧ್ಯವಾಗಿಸಲು ಆಡಳಿತ ಯಂತ್ರದ ಬಗ್ಗೆ ಆಗಿಂದಾಗ್ಗೆ ಗಮನಹರಿಸುವುದು ಅತ್ಯವಶ್ಯ. ಅಭಿವೃದ್ಧಿ ಕಾರ್ಯಗಳು ಸಮರ್ಥವಾಗಿ ನಡೆಯದಿದ್ದ ಸಂದರ್ಭದಲ್ಲಿ ನಾವು ರಾಜಕೀಯ ಅಥವಾ ಸರ್ಕಾರದ ಹಿತಾಸಕ್ತಿಯ ಕೊರತೆ ಎಂದು ಸುಲಭವಾಗಿ ಹೇಳಿಬಿಡುತ್ತೇವೆ. ಸಮರ್ಥ ಕಾರ್ಯಾಂಗ ವಿಲ್ಲದಿದ್ದರೆ ಶಾಸಕಾಂಗ ಒಂಟೆತ್ತಿನ ಗಾಡಿಯಂತೆ. ಸಾಕಷ್ಟು ಸಂದರ್ಭದಲ್ಲಿ ಆಡಳಿತ ಯಂತ್ರಕ್ಕೆ ಸುಶಾಸನದ ತೈಲ ಎರೆಯದಿದ್ದರೆ ಅದರ ಚಕ್ರಗಳು ವಕ್ರವಾಗಿ ಸುತ್ತಲು ಶುರುವಿಡುತ್ತದೆ. ನಮ್ಮ ಆಡಳಿತ ವ್ಯವಸ್ಥೆಯಲ್ಲಿರುವ ಅಸಮರ್ಪಕತೆ, ಕೊರತೆ ಮತ್ತು ಸಂಕೀರ್ಣತೆಗಳ ಅವಲೋಕನಕ್ಕಾಗಿ, ಸುಶಾಸನದ ಅನುಸರಣೆಗಾಗಿ ಆಡಳಿತದ ಉತ್ತಮ ಮಾದರಿಗಳು, ನೀತಿಗಳು, ಅನುಷ್ಠಾನ ಸೂತ್ರಗಳು ಮತ್ತು ಪ್ರಕ್ರಿಯೆಗಳ ಚಿಂತನ-ಮಂಥನಕ್ಕಾದರೂ ಈ ದಿನ ವೇದಿಕೆಯಾದರೆ ಆಳುವ ಸರ್ಕಾರಗಳ ಸಾಕ್ಷಿಪ್ರಜ್ಞೆ ಕೊಂಚ ಜಾಗೃತಾವಸ್ಥೆಗೆ ಬರಲು ಸಾಧ್ಯ.

ಸರ್ಕಾರ – ಆಡಳಿತ:

ಸರ್ಕಾರ ಅಥವಾ ಆಡಳಿತ ಹೊಸ ಪರಿಕಲ್ಪನೆಯೇನು ಅಲ್ಲ, ಅದು ನಾಗರಿಕತೆಯಷ್ಟೇ ಹಳೆಯದು. ಸರ್ಕಾರ ಪ್ರಜಾತಂತ್ರ ಅಥವಾ ಇನ್ಯಾವುದೇ ಪ್ರಕ್ರಿಯೆ ಮೂಲಕ ಜಾರಿಗೆ ಬಂದ ಆಡಳಿತ ನಡೆಸುವ ವ್ಯವಸ್ಥೆ. ಸರ್ಕಾರ ವಿವಿಧ ಸ್ಥರ ಮತ್ತು ಪ್ರಕಾರಗಳಲ್ಲಿ ಇರುವುದನ್ನು ನಾವು ಕಾಣಬಹುದು. ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಸರ್ಕಾರಗಳು ಚಾಲ್ತಿಯಲ್ಲಿವೆ. “ಸರ್ಕಾರ ಮತ್ತು ಆಡಳಿತವನ್ನು ಒಂದು ಜವಾಬ್ದಾರಿ. ಅದನ್ನು ಸಂಪೂರ್ಣ ಸದ್ಭಾವನೆಯಿಂದ ನೆರವೇರಿಸಬೇಕು. ನಾಯಕ ಅಥವಾ ಆಡಳಿತಗಾರ ತಾನಿರುವ ಸಮಾಜದ ಉನ್ನತಿಗಾಗಿ ನಿಸ್ವಾರ್ಥದಿಂದ ಸಮರ್ಪಣೆ ಮಾಡಿ ಸೇವೆ ಸಲ್ಲಿಸಬೇಕು” ಎಂದು ಚಾಣಕ್ಯ ಬಹಳ ಗಮ್ಯವಾಗಿ ವ್ಯಖ್ಯಾನಿಸಿದ್ದಾರೆ.  ದೇಶದ ನಿರ್ವಹಣೆ, ಅಭಿವೃದ್ಧಿ, ಔನ್ನತ್ಯಕ್ಕಾಗಿ ಸರ್ಕಾರ ರಚಿಸುವ ಶಾಸನಗಳು ನೀತಿಗಳು ಮತ್ತು ಅದರ ಅನುಷ್ಠಾನಕ್ಕಾಗಿ ಕೈಗೊಳ್ಳುವ ಕ್ರಮ ನಿರ್ಧಾರಗಳ ಪ್ರಕ್ರಿಯೆ ಹಾಗೂ ವ್ಯವಸ್ಥೆಗೆ ಆಡಳಿತ ಎಂದು ವ್ಯಾಖ್ಯಾನಿಸಬಹುದು.

ಸುಶಾಸನ ಅಥವಾ ಒಳ್ಳೆಯ ಆಡಳಿತ:

ಆಡಳಿತದ ದುರುಪಯೋಗ ಅಥವಾ ದುರಾಡಳಿತ ಕೇವಲ ಇಂದಿನ ಸಮಸ್ಯೆಯಲ್ಲ. 2400 ವರ್ಷಗಳ ಹಿಂದೆಯೇ ಚಾಣಕ್ಯ ಈ ಮಾತನ್ನು ಹೇಳಿರುವುದು ಅದಕ್ಕೆ ಪುರಾವೆ. “ನಾವೆಷ್ಟೇ ಕಾಯ್ದೆ, ಕಾನೂನು, ನಿಯಮಗಳು ಅಥವಾ ಲೆಕ್ಕಪರಿಶೋಧನಾ ವ್ಯವಸ್ಥೆ ಜಾರಿಗೆ ತಂದರೂ ಆಡಳಿತಗಾರನ ಅನೈತಿಕ ವರ್ತನೆಯನ್ನು ತಡೆಯಲು ಸಾಧ್ಯವಿಲ್ಲ. ವ್ಯಕ್ತಿತ್ವ ನಿರ್ಮಾಣ ಮತ್ತು ಅನುಷ್ಠಾನ ಸಾಧ್ಯ ನೈತಿಕ ಮೌಲ್ಯಗಳ ಬುನಾದಿಕರಣ ಮಾತ್ರ ಸುಶಾಸನಕ್ಕೆ ಸೋಪಾನ”. ಉತ್ತಮ ಆಡಳಿತ ವ್ಯವಸ್ಥೆ ಸಾಧಿಸಲು ಆಡಳಿತಗಾರರಲ್ಲಿ ನೈತಿಕತೆ ಅತಿ ಮುಖ್ಯ. ಕೌಟಿಲ್ಯ ‘ಧರ್ಮ’ ಎನ್ನುವ ಪದ ಬಳಸುತ್ತಾರೆ. ಅಂದರೆ ಕರ್ತವ್ಯ ನಿರ್ವಹಿಸುವಲ್ಲಿ, ಮತ್ತು ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಆಡಳಿತಗಾರ ಸದಾಚಾರಿಯಾಗಿರುವುದು ಅತಿಮುಖ್ಯ. ಕರ್ತವ್ಯ, ಸದಾಚಾರ, ಅಹಿಂಸೆ, ಸತ್ಯ, ಸದುದ್ದೇಶ, ಸಹಾನುಭೂತಿ ಮತ್ತು ಸಹಿಷ್ಣತೆ ಸುಶಾಸನದ ಅನುಷ್ಠಾನಕ್ಕೆ ಅವಶ್ಯವಿರುವ ನೈತಿಕ ಮೌಲ್ಯಗಳು.

ಉತ್ತಮ ಆಡಳಿತ ವ್ಯವಸ್ಥೆ ನಿರ್ಮಿಸುವಲ್ಲಿ ಆಡಳಿತಗಾರರ ಪಾತ್ರ ಎಷ್ಟು ಪ್ರಮುಖ ಎಂಬುದನ್ನು ಬಾಬಾಸಾಹೇಬ ಅಂಬೇಡ್ಕರರ ಈ ಮಾತಿನಿಂದ ಅರ್ಥಮಾಡಿಕೊಳ್ಳಬಹುದು “ಸಂವಿಧಾನ ಎಷ್ಟೇ ಒಳ್ಳೆಯದಾಗಿದ್ದರೂ ಅದನ್ನು ಜಾರಿಗೊಳಿಸುವವರು ಒಳ್ಳೆಯವರಲ್ಲದಿದ್ದರೆ ಅದು ಕೆಟ್ಟದ್ದೆಂದು ಸಾಬೀತಾಗುತ್ತದೆ. ಸಂವಿಧಾನವು ಎಷ್ಟೇ ಕೆಟ್ಟದ್ದಾದರೂ ಅದನ್ನು ಜಾರಿಗೊಳಿಸುವವರು ಒಳ್ಳೆಯವರಾಗಿದ್ದರೆ ಅದು ಒಳ್ಳೆಯದೆಂದು ಸಾಬೀತಾಗುತ್ತದೆ”.

ಒಂದು ಜವಾಬ್ದಾರಿಯುತ ಸರ್ಕಾರ ಉತ್ತಮ ಆಡಳಿತ ನೀಡಲು ಕೆಲವು ಗುಣಾತ್ಮಕ ಅಂಶಗಳನ್ನ ಪ್ರಜ್ಞಾ ಪೂರ್ವಕವಾಗಿ ಜಾರಿಗೆ ತರಬೇಕಾಗುತ್ತದೆ.  ಆಡಳಿತದಲ್ಲಿ ಭಾಗವಹಿಸುವಿಕೆ – ಸಮತೆ – ಒಳಗೊಳ್ಳುವಿಕೆ, ಕಾನೂನಿನ ಶಾಸನ, ಅಧಿಕಾರದ ವಿಕೇಂದ್ರೀಕರಣ, ಮುಕ್ತ, ಸ್ವತಂತ್ರ ಮತ್ತು ಜವಾಬ್ದಾರಿಯುತ ಮಾಧ್ಯಮ ವ್ಯವಸ್ಥೆ, ಅಧಿಕೃತ (ಚುನಾಯಿತ) ಸರ್ಕಾರ, ಉತ್ತರದಾಯಿತ್ವ, ಪಾರದರ್ಶಕತೆ ಮತ್ತು ರಾಜಕೀಯದಲ್ಲಿ ಹಣದ ವಿನಾಶಕಾರಿ ಪರಿಣಾಮ (ಮೇಲಾಟ)ದ ನಿಯಂತ್ರಣ ಸುಶಾಸನದ ಪ್ರಮುಖ ಲಕ್ಷಣಗಳು.

ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಮತ್ತು ಸುಶಾಸನ:

ಅಟಲ್ ಜಿ ಅವರ ದೂರದರ್ಶಿ ರಾಜತಾಂತ್ರಿಕ ಕ್ರಮಗಳು ಕೇವಲ ಅವರ ಕಾಲದಕ್ಕಷ್ಟೇ ಅಲ್ಲದೆ ಇಂದಿನವರೆಗೂ ಸುಶಾಸನಕ್ಕೆ ಬುನಾದಿ ಮತ್ತು ಹಾದಿ ಹಾಕಿಕೊಟ್ಟಿತು ಎಂದರೆ ಅತಿಶಯೋಕ್ತಿಯಲ್ಲ. ದೇಶದ ಪ್ರತಿ ನಾಗರಿಕನಿಗೆ ಮಾಹಿತಿ ಹಕ್ಕನ್ನು ನೀಡಿ ನೈಜ ಸಬಲೀಕರಣಕ್ಕೆ ಬುನಾದಿಯಾದದ್ದು ವಾಜಪೇಯಿ ಸರ್ಕಾರದ ಅವಧಿಯಲ್ಲಿ ಬಂದ ‘ಮಾಹಿತಿ ಸ್ವಾತಂತ್ರ್ಯ ಕಾಯ್ದೆ 2002’. ಉತ್ತರದಾಯಿತ್ವ ಆಡಳಿತದ ಮೇರು ಲಕ್ಷಣ. ವಿತ್ತೀಯ ಶಿಸ್ತು ಮತ್ತು ವಿತ್ತೀಯ ಕೊರತೆಯ ಪ್ರಮಾಣವನ್ನು ಕಡಿಮೆಗೊಳಿಸಲು ವಾಜಪೇಯಿ ಸರ್ಕಾರ ‘ವಿತ್ತೀಯ ಜವಾಬ್ದಾರಿ ಮತ್ತು ಆಯವ್ಯಯ ನಿರ್ವಹಣಾ ಕಾಯ್ದೆ’ ಇನ್ನು ಜಾರಿಗೆ ತಂದಿತು. ರಸ್ತೆಗಳು ಕೇವಲ ಮೂಲಭೂತ ಸೌಕರ್ಯ ವಲ್ಲ ಬದಲಿಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪಥ ಎಂದು ಅವರು ‘ಸುವರ್ಣ ಚತುಷ್ಪಥ ಯೋಜನೆಯ’ ಮೂಲಕ ಸಾಧಿಸಿ ತೋರಿಸಿದರು. ಕೇವಲ 500 ಮಂದಿ ಜನಸಂಖ್ಯೆ ಇರುವ (ಗುಡ್ಡಗಾಡು ಪ್ರದೇಶದಲ್ಲಿ 250) ಪುಟ್ಟ ಹಳ್ಳಿಗಳಿಗೂ ‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ’ಯ ಮೂಲಕ ಸಂಪರ್ಕ ಕಲ್ಪಿಸಿ ಗ್ರಾಮೀಣಾಭಿವೃದ್ಧಿಗೆ ರಹದಾರಿ ಕಲ್ಪಿಸಿದವರು ಅಟಲ್ ಜೀ. ಇನ್ನು ವಿಶ್ವದ ಪ್ರಭಾವಿ ರಾಷ್ಟ್ರಗಳ ವಿರೋಧಕ್ಕೆ ಮಣಿಯದೇ ಪೋಕ್ರಾನಿನಲ್ಲಿ ಅಣು ಪರೀಕ್ಷೆ ನಡೆಸಿದ ಅವರ ದಿಟ್ಟತನ ಭಾರತದ ಪ್ರತಿ ನಾಗರಿಕನ ಸ್ವಾಭಿಮಾನದ ಆಚರಣೆ.  “ಮಕ್ಕಳು ಶಾಲೆಯತ್ತ ತೆರಳಲಾಗದೆ ಇದ್ದರೆ ಶಾಲೆಯೇ ಮಕ್ಕಳ ಬಳಿ ತೆರಳಬೇಕು” ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯನ್ನು ಸಾಧಿಸಿದ್ದು ಅಟಲ್ ಜಿ ಸರ್ಕಾರ ಜಾರಿಗೆ ತಂದ ಸರ್ವಶಿಕ್ಷಾ ಅಭಿಯಾನ.

ಸುಶಾಸನವನ್ನು ಅವಲೋಕಿಸಲು, ಅರ್ಥೈಸಿಕೊಳ್ಳಲು ಮತ್ತು ಅನುಷ್ಠಾನ ಕ್ರಮಗಳನ್ನು ರೂಪಿಸಲು ಅಟಲ್ಜಿ ರವರ ಜನುಮದಿನ ಕ್ಕಿಂತ ಸುದಿನ ಬೇರೆ ಇರಲಿಕ್ಕೆ ಸಾಧ್ಯವೇ?

“ಸುಶಾಸನ ಸರ್ಕಾರಗಳ ಮತ್ತು ಸಮುದಾಯದ ಜವಾಬ್ದಾರಿ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಮಾನ್ಯ ನರೇಂದ್ರ ಮೋದಿ ಅವರು ಹೇಳಿದಂತೆ ಸುಶಾಸನ ಸಾಧ್ಯವಾಗುವುದು ಪ್ರತಿ ನಾಗರಿಕನೂ ತನ್ನ ಹಕ್ಕುಗಳಿಗಿಂತ ಮಿಗಿಲಾಗಿ ಜವಾಬ್ದಾರಿಗಳನ್ನು ನಿಭಾಯಿಸುವ ಹೆಮ್ಮೆಯ ಭಾರತೀಯ ನಾದಾಗ.

ಸುಶಾಸನ ದಿನದ ಶುಭಾಶಯಗಳು!

ಡಾ. ಬಸವರಾಜು ಆರ್ ಶ್ರೇಷ್ಠ
ಕಾರ್ಯನಿರ್ವಾಹಕ ನಿರ್ದೇಶಕರು, ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕೇಸಿ ಮೋಮೆಂಟ್, ಮೈಸೂರು

Tags:

About Us

Grassroots Research and Advocacy Movement (GRAAM) is a development research initiative in India focused on policy research, impact assessment, and strategic consultation. Collaborating with government, citizens, civil society, and corporate sectors, GRAAM ensures grassroots voices shape citizen-centric public policies. Their mission is to drive development by building human and social capital through evidence-based, community-informed solutions.

Our Recent Posts

  • All Posts
  • Academics
  • Action research
  • Author
  • Challenges and Learnings in Skill Development
  • Community Development and Women Empowerment
  • CSR
  • Development Research
  • Diversity Equity and Inclusion (DEI)
  • Evaluating Digital Governance Initiatives
  • Evidence-Based Advocacy
  • Global Conferences
  • Governance and Public Policy
  • Government Initiatives Evaluation
  • GRAAM Publication
  • Grassroot Stories
  • Media
  • News
  • NGO Resilience
  • Organizational Milestones and Anniversaries
  • Policy Engagement
  • Social business
  • Sugamya Shiksha
  • Sustainability and Environment
  • Uncategorized
  • Urban Governance
  • Workshop
  • Youth Empowerment Programs
    •   Back
    • CSR
    • Education
    • Livelihoods
    • Social Economy

Tags

&#169 2024 Graam, All Rights Reserved. Designed By Future Revolution